ಪಾಳಿ ಸಾಹಿತ್ಯ --
ಬುದ್ಧ ಭಗವಾನರು ಬೋಧಿಯನ್ನು ಪಡೆದ ಮೇಲೆ ನುಡಿದ ವಚನಗಳೇ ಪಾಳಿ ಸಾಹಿತ್ಯದ ತಳಹದಿ. ಅನುಭವದಿಂದ ತಿಳಿಯಬಹುದಾದ, ವಿಮರ್ಶಿಸಬಹುದಾದ, ಜ್ಞಾನಿಗಳು ಪಡೆದುಕೊಳ್ಳಬಹುದಾದ ಬೋಧಿಯೇ ಬುದ್ಧ ವಚನಗಳೆಲ್ಲದರ ಕೇಂದ್ರ ವಸ್ತು. ಬುದ್ಧ ವಚನಕ್ಕೆ ಬಂದಿರುವ ತ್ರಿಪಿಟಕ ಪದ ಬೋಧಿ ಎಂಬ ಪದದಿಂದಲೇ ನಿಷ್ಪನ್ನವಾಗಿದೆ. ಬುದ್ಧಗಯೆಯಲ್ಲಿ ಗೋತಮರು ಬೋಧಿಯನ್ನು ಪಡೆದಂದಿನಿಂದ ಕುಶಿನಾರದಲ್ಲಿ ಪರಿನಿರ್ವಾಣವಾಗುವವರೆಗೆ ನಲವತ್ತೈದು ವರ್ಷಗಳ ಕಾಲ ನುಡಿದದ್ದು, ಬೋಧಿಸಿದ್ದು ತ್ರಿಪಿಟಕಗಳ ವಸ್ತುವಾಗಿದೆ, ವಿಷಯವಾಗಿದೆ. 

ಪಾಳಿ ಸಾಹಿತ್ಯವನ್ನು ಎರಡು ಭಾಗಮಾಡಬಹುದು. 1. ಪ್ರಮಾಣ ಗ್ರಂಥಗಳು ಅಥವಾ ತ್ರಿಪಿಟಕ ಸಾಹಿತ್ಯ. 2 ಪ್ರಮಾಣೇತರ ಗ್ರಂಥಗಳು ಅಥವಾ ಅನುಪಿಟಕ ಸಾಹಿತ್ಯ. ಅನುಪಿಟಕ ಸಾಹಿತ್ಯವನ್ನು ಅನುಪಾಳಿ ಅಥವಾ ಪಾಳಿ ಪ್ರಮಾಣ ಗ್ರಂಥಗಳಿಗೆ ಸಂಬಂಧಿಸಿದ್ದು, ಮತ್ತು ಇತರ ಧಾರ್ಮಿಕ, ಲೌಕಿಕ, ವಿಷಯಗಳಿಗೆ ಸಂಬಂಧಿಸಿದ್ದು ಎಂಬುದಾಗಿ ಎರಡು ವಿಧವಾಗಿ ವಿಭಾಗ ಮಾಡಬಹುದು. 

ಪ್ರಮಾಣ ಸಾಹಿತ್ಯ : ಪಾಳಿ ಪ್ರಮಾಣ ಸಾಹಿತ್ಯವನ್ನು ಮೂರು ಸಂಗ್ರಹಗಳಾಗಿ ವಿಭಾಗಿಸಲಾಗಿದೆ. ಇವುಗಳ ಹೆಸರು ಪಿಟಕಗಳು ಅಥವಾ ಬುಟ್ಟಿಗಳು. ಆದ್ದರಿಂದಲೇ ತ್ರಿಪಿಟಕ ಅಥವಾ ಮೂರು ಬುಟ್ಟಿಗಳು ಎಂಬ ಹೆಸರು ಬಂದಿರುವುದು. ಮಂಕರಿ ಎಂಬ ರೂಪಕ ಅರ್ಥಪೂರ್ಣವಾಗಿರುವುದು. ಭೂಮಿಯನ್ನು ಅಗೆಯುವಾಗ ತುಂಬಿದ ಮಂಕರಿ ಕೈಯಿಂದ ಕೈಗೆ ಸಾಗುವಂತೆ ಈ ರೂಪಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಹೋಗುವ ವಸ್ತುವೊಂದನ್ನು ಸೂಚಿಸುತ್ತದೆ. ಸಾಮಾನುಗಳನ್ನು ಜೋಪಾನವಾಗಿ ಇಡಲು ಉಪಯೋಗಿಸುವ ದೊಡ್ಡ ಪೆಟ್ಟಿಗೆಯಂಥ ವಸ್ತುವನ್ನು ಈ ರೂಪಕ ಸೂಚಿಸುವುದಿಲ್ಲ. ಅಂದರೆ ಮುಂದಿನ ಪೀಳಿಗೆಗಳಿಗೆ ದತ್ತಿಯಾಗಿ ಕೊಡಲ್ಪಡುವ ಒಂದು ಸಜೀವ ವಸ್ತು ಅಥವಾ ಸಮ್ಯಕ್ ಜೀವನದ ಸಂಪ್ರದಾಯವೇ ಪಿಟಕ, ಬೈಬಲ್, ಖುರಾನ್ ಅಥವಾ ವೇದದಂತೆ ತ್ರಿಪಿಟಕಗಳನ್ನು ಅಪೌರುಷೇಯವಾದುವೆಂದಾಗಲೇ ದೇವರ ಅಧಿಕಾರವಾಣಿಯಾದುದ್ದರಿಂದ ಪ್ರಶ್ನಾತೀತವಾದವೆಂದಾಗಲೀ ಬೌದ್ಧರು ನಂಬುವುದಿಲ್ಲ. ತ್ರಿಪಿಟಕಗಳು ಸಮ್ಯಕ್ ಮಾರ್ಗವನ್ನು ಕೈಯಿಂದ ಕೈಗೆ ಸಾಗಿಸುವುದರಿಂದ ಅವು ಬೋಧಿಗೆ ಮಾರ್ಗದರ್ಶಕಗಳಾಗಿವೆ. ಮೂರು ಪಿಟಕಗಳಾವುವೆಂದರೆ ವಿನಯಪಿಟಕ, ಸುತ್ತಪಿಟಕ, ಅಭಿಧರ್ಮಪಿಟಕ. ತ್ರ್ರಿಪಿಟಕಗಳ ಎಲ್ಲ ವಿವರಗಳಿಗೆ. 
(ನೋಡಿ- ತ್ರಿಪಿಟಕಗಳು)

ಪ್ರಮಾಣೇತರ ಗ್ರಂಥಗಳು: ಐತಿಹಾಸಿಕ ದೃಷ್ಟಿಯಿಂದ ಮೂರು ಕಾಲಗಳಿಗೆ ಸೇರಿದೆ. ಪ್ರಮಾಣ ಗ್ರಂಥಗಳು ರೂಪುಗೊಂಡಂದಿನಿಂದ ಕ್ರಿ.ಶ. ಐದನೆಯ ಶತಮಾನದವರೆಗಿನದು ಮೊದಲನೆಯ ಕಾಲ. ಐದರಿಂದ ಹನ್ನೆರಡನೆಯ ಶತಮಾನದವರಗಿನದು ಎರಡನೆಯ ಕಾಲ. ಹನ್ನೆರಡನೆಯ ಶತಮಾನದಿಂದ ಆಧುನಿಕ ಕಾಲದವರೆಗಿನದು ಮೂರನೆಯ ಕಾಲ. ಮೊದಲನೆಯ ಕಾಲದ ವಾಙ್ಮಯದ ಅನೇಕ ಗ್ರಂಥಗಳು ಅಳಿದು ಹೋಗಿವೆ. ಉಪಲಬ್ಧವಿರುವ ಕೆಲವೇ ಗ್ರಂಥಗಳು ಮಹಾಗ್ರಂಥಗಳೆನಿಸಿಕೊಂಡಿವೆ. ಎರಡನೆಯ ಕಾಲಾವಧಿಯಲ್ಲಿ ಪ್ರಮಾಣ ಗ್ರಂಥಗಳಿಗೆ ವ್ಯಾಖ್ಯಾನ ಗ್ರಂಥಗಳಾಗಿ ರಚಿತವಾದವು. ಹೀಗೆ ಈ ಅವಧಿ ಪ್ರಮಾಣೇತರ ಪಾಳಿ ವಾಙ್ಮಯದ ಬೆಳವಣಿಗೆಗೆ ಪ್ರಸಿದ್ಧವಾಗಿವೆ. ಮೂರನೆಯ ಅವಧಿಯಲ್ಲಿ ಇನ್ನೂ ವಿಪುಲವಾಗಿ ವಾಙ್ಮಯ ಬೆಳೆಯಿತು. ವಾಖ್ಯಾನಗಳಿಗೆ ವ್ಯಾಖ್ಯಾನ ಗ್ರಂಥಗಳಿಂದ ಟೀಕುಗಳೂ ಸಾಹಿತ್ಯದ ಇತರ ಪ್ರಕಾರಗಳ ಈ ಅವಧಿಯಲ್ಲಿ ಒಳ್ಳೆಯ ಗ್ರಂಥಗಳು ರಚಿತವಾದವು. 

1. ಮಹಾಗ್ರಂಥಗಳು : ನೆತ್ತಿಪಕರಣ ಮತ್ತು ಪೇಟಿಕೋಪದೇಸ, ಮಿಳಿಂದ ಪನ್ನ ಮತ್ತು ಸುತ್ತಸಂಗಹೋ ಎಂಬ ನಾಲ್ಕು ಗ್ರಂಥಗಳು ಈ ಗುಂಪಿಗೆ ಸೇರಿವೆ. ಮೊದಲನೆಯ ಎರಡು ಗ್ರಂಥಗಳು ಅರ್ಹತಮಹಾಕಚ್ಚಾಯನರೆಂಬ ಭಗವಾನರ ಶಿಷ್ಯರಿಂದ ರಚಿತವಾದವು. ಇವು ಅಬಿಧಮ್ಮದ ಶೈಲಿಯಲ್ಲಿದ್ದು ಬೌದ್ಧ ಧರ್ಮಕ್ಕೆ ಒಳ್ಳೆಯ ಕೈಪಿಡಿಯಾಗಿದೆ. ಮಿಳಿಂದಪನ್ನ ಎಂಬುದು ಸೂತ್ರದ ಶೈಲಿಯಲ್ಲಿದೆ. ಇದರಲ್ಲಿ ಬೌದ್ಧ ಧರ್ಮದ ಅನೇಕ ಮುಖ್ಯಾಂಶಗಳ ಮೇಲೆ ಯವನ ದೊರೆಯಾದ ಮಿಳಿಂದನಿಗೂ (ಮಿನಾಂಡರ್) ನಾಗಸೇನಥೇರರಿಗೂ ನಡೆದ ಸಂವಾದವಿದೆ. ಸುತ್ತಸಂಗಹೋ ಗ್ರಂಥ ಧರ್ಮಪ್ರಸಾರಕರಿಗಾಗಿ ರಚಿಸಿದ ಸೂತ್ರಗಳ ಸಂಕಲನವಾಗಿದೆ.

ದೀಪವಂಸವೆಂಬ ಇತಿಹಾಸ ಗ್ರಂಥವೂ ಈ ಕಾಲದಲ್ಲಿ ರಚಿತವಾಯಿತು. ಇದರಲ್ಲಿ ಲಂಕಾ ದ್ವೀಪದ ಚರಿತ್ರೆ ಇದೆ. ಮಹಾಟ್ಠಕಥಾ, ಮಹಾಪ್ಪಚಾರಿ, ಚುಲಪ್ಪಚಾರಿ, ಅಂಥಕಟ್ಠಕಥಾ, ಪಞ್ಞವಾರ, ಸಂಖೇಪಟ್ಠಕಥಾ ಎಂಬ ವಾಖ್ಯಾನ ಗ್ರಂಥಗಳೂ ಈ ಕಾಲದಲ್ಲಿ ರಚಿತವಾದುವು. ಬುದ್ಧಘೋಷರು ತಮ್ಮ ವಾಖ್ಯಾನಗಳಲ್ಲಿ ಇವುಗಳ ಹೆಸರುಗಳನ್ನು ಉಲ್ಲೇಖಿಸುತ್ತಾರೆ. ಆದರೆ, ಇವಾವುವೂ ಈಗ ಉಪಲಬ್ಧವಿಲ್ಲ.

2. ವ್ಯಾಖ್ಯಾನ ಗ್ರಂಥಗಳು: ಈ ಕಾಲದ ಅತಿ ಮುಖ್ಯ ಕೃತಿಗಳೆಂದರೆ ಆಚಾರ್ಯ ಬುದ್ಧಘೋಷರ ಗ್ರಂಥಗಳು. ಅವರು ಬುದ್ಧ ಕನಿತಾಯ ಕೆಲ ಪ್ರಕರಣಗಳು. ವಿನಾತ್ರಿಪಿಟಕದ ಎಲ್ಲ ಭಾಗಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ವಿನಯ ಪಿಟಕ (ಪಾತಿಮೊಕ್ಕವನ್ನೊಳಗೊಂಡು) ಮತ್ತು ಅಭಿದಮ್ಮಪಿಟಕಗಳಿಗೆ ಸಂಪೂರ್ಣವಾಗಿ ವ್ಯಾಖ್ಯಾನ ಬರೆದಿದ್ದಾರೆ. ಸುತ್ತಪಿಟಕದ ಮೊದಲನೆಯ ನಾಲ್ಕು ನಿಕಾಯಗಳಿಗೂ ಐದನೆಯ ನಿಕಾಯದ ಕೆಲವು ಭಾಗಗಳಿಗೂ ವ್ಯಾಖ್ಯಾನ ಮಾಡಿದ್ದಾರೆ. ಆಚಾರ್ಯರ ಮಹಾಕೃತಿ ಅಭಿದಮ್ಮದ ಸ್ವಚ್ಚ ಶೈಲಿಯಲ್ಲಿ ವಿಸುದ್ಧಿ ಮಗ್ಗ. ಇದು ಬುದ್ಧ ವಚನದ ವಿಶ್ವಕೋಶದಂತಿದೆ. ಭರತ ಖಂಡದವರಾಗಿದ್ದ ಆಚಾರ್ಯ ಬುದ್ಧ ಘೋಷರು ತ್ರಿಪಿಟಕಗಳನ್ನೂ ಹಳೆಯ ಅಟ್ಠಕಥೆಗಳನ್ನೂ ಓದಲು ಸಿಂಹಳಕ್ಕೆ ಹೋದರು. ಇಷ್ಟು ಅಪಾರ ಸಂಖ್ಯೆಯ ವಾಖ್ಯಾನ ಗ್ರಂಥಗಳೆಲ್ಲವನ್ನೂ ಅವರು ಸಿಂಹಳದಲ್ಲಿದ್ದಾಗ ಬರೆದರು. ಅವರನ್ನು ಸರ್ವಶ್ರೇಷ್ಠ ಬೌದ್ಧ ಗ್ರಂಥಕಾರರೆಂದು ಪರಿಗಣಿಸಲಾಗಿದೆ. 

ಆಚಾರ್ಯ ಬುದ್ಧಸತ್ತರೆಂಬುವರು ಈ ಕಾಲದಲ್ಲಿ ಬರೆದ ಗ್ರಂಥಗಳೂ ಈ ವ್ಯಾಖ್ಯಾನ ವರ್ಗಕ್ಕೆ ಸೇರಿವೆ. ಅವರು ಬುದ್ಧ ವಂಸದ ಮೇಲೆ ವ್ಯಾಖ್ಯಾನ ಬರೆದಿರುವವರಲ್ಲದೆ ವಿನಯವಿನಿಚ್ಚಯ ಮತ್ತು ಉತ್ತರ ವಿನಿಚ್ಚಯ (ವಿನಯ ಪಿಟಕದ ಪದ್ಯರೂಪ ಸಂಗ್ರಹ) ಅಭಿಧಮ್ಮವತಾರ (ಬೌದ್ಧ ಮನಶಾಸ್ತ್ರದ ಕೈಪಿಡಿ) ಜಿನಾಲಂಕಾರ (ಬುದ್ಧ ಭಗವಾನರ ವಿಜಯದ ಮೇಲಿನ ಮಹಾಕಾವ್ಯ) ಎಂಬ ಉತ್ತಮ ಗ್ರಂಥಗಳನ್ನು ರಚಿಸಿದ್ದಾರೆ. ಆಚಾರ್ಯ ಧಮ್ಮಪಾಲರೆಂಬ ಮತ್ತೊಬ್ಬ ಗ್ರಂಥಕಾರರ ಥೇರಗಾಥಾ, ಚರ್ಯಪಿಟಕ ಮುಂತಾದ ಬುದ್ಧಕನಿಕಾಯದ ಉಳಿದ ಪ್ರಕರಣಗಳಿಗೆ ವ್ಯಾಖ್ಯಾನಗಳನ್ನೂ ಮೊದಲನೆಯ ನಾಲ್ಕು ನಿಕಾಯಗಳ (ದೀಫ ಮಜ್ಝಿಮ, ಸಂಯುತ್ತ ಮತ್ತು ಅಂಗುತ್ತರ) ವಾಖ್ಯಾನಗಳಿಗೆ ಅಂದರೆ ನೇತ್ತಿಪಕರಣ, ವಿಸುದ್ಧಿ ಮಗ್ಗ ಮುಂತಾದ ಗ್ರಂಥಗಳಿಗೆ ಟೀಕುಗಳನ್ನು ಬರೆದಿದ್ದಾರೆ. ಈ ಆಚಾರ್ಯರೆಲ್ಲರೂ ಭಾರತೀಯರು. ಇವರಂತೆ ಇನ್ನೂ ಹಲವಾರು ವಿದೇಶಿಯ ವ್ಯಾಖ್ಯಾನಕಾರರು ಈ ಕಾಲದಲ್ಲಿದ್ದರು. ಇವರಲ್ಲಿ ಬಹುಜನ ಸಿಂಹಳೀಯರು. ಇವರಲ್ಲಿ ಮುಖ್ಯರಾದವರೆಂದರೆ 1. ಆಚಾರ್ಯ ಆನಂದ ; ಈತ ಅಭಿದಮ್ಮ ಮೂಲಟೀಕವನ್ನೂ ಅಭಿದಮ್ಮದ ಮೇಲೆ ಬುದ್ಧಘೋಷರೂ ಬರೆದ ವ್ಯಾಖ್ಯಾನಗಳಿಗೆ ಟೀಕೆಗಳನ್ನೂ ಬರೆದಿದ್ದಾನೆ. 2. ಆಚಾರ್ಯ ಉಪಸೇನ ಎಂಬಾತ ನಿದ್ದೇಸಕ್ಕೆ ವ್ಯಾಖ್ಯಾನ ಬರೆದಿದ್ದಾನೆ. 3. ಆಚಾರ್ಯ ಅನುರುದ್ಧ ಎಂಬಾತ ಅಭಿಧಮ್ಮಕ್ಕೆ ಖ್ಯಾತ ಕೈಪಿಡಿಯೊಂದನ್ನು ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. 4. ಆಚಾರ್ಯ ಮಹಾನಾಮ ಎಂಬಾತ ಪಾತಿಸಂಭಿದಾ ಮಗ್ಗಕ್ಕೆ ವ್ಯಾಖ್ಯಾನ ಬರೆದಿದ್ದಾನೆ. 5. ಆಚಾರ್ಯ ಕಸ್ಸಪ, ವಜಿರಬುದ್ಧಿ, ಖೇಮ, ಧಮ್ಮಸಿರಿ ಮತ್ತು ಮಹಾಸಾಮಿ ಮೊದಲಾದವರು ಅನೇಕ ಗ್ರಂಥಗಳಿಗೆ ಟೀಕೆ ರಚಿಸಿದ್ದಾರೆ.

ಇದೇ ಕಾಲದಲ್ಲಿ ಹೊರಬಂದ ಕೆಲವು ವೃತ್ತಾಂತ ಕಥನಗಳು ವ್ಯಾಕರಣಗಳು ಇವು. ಮಹಾವಂಶ, ಅನಾಹತವಂಶ, ಕಚ್ಚಾಯನ ವ್ಯಾಕರಣ, ಮಹಾನಿರುತ್ತಿಗ್ರಂಥ. 

1 ನೆಯ ಪರಾಕ್ರಮ ಬಾಹು ರಾಜನಾಗಿದ್ದಾಗ ಪಾಳಿ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ಅವನ ನೇತೃತ್ವದಲ್ಲಿ ಸಿಹಲ ಥೇರ ಮಹಾಕಸಪ ಒಂದು ದೊಡ್ಡ ವಿದ್ವತ್ ಸಭೆ ಕೂಡಿಸಿ ಅಟ್ಠಕಥೆಗಳಿಗೂ ಅವಕ್ಕೆ ಸಂಬಂಧಪಟ್ಟ, ಇತರ ಗ್ರಂಥಗಳಿಗೂ ಟೀಕೆ ಬರೆಸಿದ. ಅವನೊಡನೆ ಸಹಕರಿಸಿದವರಲ್ಲಿ ಸಾರೀಪುತ್ರ, ಸಂಘರಖ್ಖಿತ, ಬುದ್ಧನಾಗ, ಸದ್ಧಮ್ಮ ಜೋತಿಪಾಲ (ಬರ್ಮದವ), ಬುದ್ಧರಖ್ಖಿತ, ಸುಮಂಗಲ ಮುಂತಾದ ಖ್ಯಾತ ವಿದ್ವನ್ಮಣಿಗಳಿದ್ದರು. ಇವರು ಐವತ್ತಕ್ಕೂ ಹೆಚ್ಚಿನ ಟೀಕಾಗ್ರಂಥಗಳನ್ನು ಬರೆದರು.
ಮುಂದಿನ ಶತಮಾನಗಳಲ್ಲಿ ಸಿಂಹಳ, ತೈಲಂಡ್, ಲಾವೋಸ್, ಬರ್ಮ ಮುಂತಾದ ಬೌದ್ಧದೇಶಗಳಲ್ಲಿ ಇದೇ ಮಾದರಿಯ ಗ್ರಂಥರಚನೆ ನಡೆಯಿತು. ಈ ಪ್ರಯತ್ನ ಆಧುನಿಕ ಕಾಲದವರೆಗೂ ನಡೆಯುತ್ತಲೇ ಇದ್ದು ಗ್ರಂಥರಚನೆ ಜೀವಂತ ಸಂಪ್ರದಾಯವಾಗಿ ಉಳಿದುಬಂದಿದೆ.

ಬರ್ಮ ದೇಶದ ಟೌಂಗೆಡ್ವಿನ್ ಪಟ್ಟಣದಲ್ಲಿ ದೊರೆತ ಹದಿನೈದನೆಯ ಶತಮಾನದ ಶಾಸನದಲ್ಲಿ 295 ಗ್ರಂಥಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಗ್ರಂಥಗಳು ವಿವಿಧ ವಿಷಯಗಳ ಮೇಲಿವೆ. ಈ ಪಟ್ಟಿ ಆ ಕಾಲದಲ್ಲಿ ಪಾಳಿವಾಙ್ಮಯದ ಬೆಳವಣಿಗೆ ಎಷ್ಟು ಹುಲುಸಾಗಿತ್ತು ಎಂಬುದನ್ನು ತೋರಿಸುತ್ತದೆ.							(ಬಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ